ಗುಹಾಸಮಾಧಿಗಳು, ಪ್ರಾಗಿತಿಹಾಸ ಕಾಲದ

ಬೃಹತ್ ಶಿಲಾ ಸಮಾಧಿ ಸಂಸ್ಕøತಿಯ ಅಂಗವಾಗಿ ದೊಡ್ಡ ಕಲ್ಲಿನ ಬಂಡೆಗಳಲ್ಲಿ ಚಕ್ರಾಕಾರದ ಅಥವಾ ಚತುರಸ್ರಾಕಾರದ ಹಳ್ಳಗಳನ್ನು ಕೊರೆದು ಆ ಹಳ್ಳಗಳ ಒಂದು ಪಾಶ್ರ್ವದಲ್ಲಿ ಪ್ರವೇಶ ದ್ವಾರವನ್ನಿಟ್ಟು ರಚಿಸಲಾದ ಭೂಗತ ಗುಹೆಗಳಲ್ಲಿ ಮಾಡುತ್ತಿದ್ದ ಸಮಾಧಿಗಳು (ರಾಕ್-ಕಟ್ ಬರಿಯಲ್ ಕೇವ್ಸ್)

ಇವು ಮೊದಲಿಗೆ ಪ್ಯಾಲೆಸ್ಟೀನಿನ ಮೆಗಿಡ್ಡೊ, ಗಿಜೆರ್, ಜೆರಿಕೊ, ಟೆಲ್ ಅಜ್ಜುಲ್, ಟೆಲ್ ಫ್ಯಾರಾ ಮುಂತಾದ ನೆಲೆಗಳಲ್ಲೂ ಮೆಡಿಟರೇನಿಯನ್ ಸಮುದ್ರದಲ್ಲಿರುವ ಸೈಪ್ರಸ್ ದ್ವೀಪದ ಲಪಿತಾಸ್, ಅಜಿಯೋಸ್, ಜಕವೋಸ್, ವೌನಿ ಮುಂತಾದ ನೆಲೆಗಳಲ್ಲೂ ಕ್ರಿ.ಪೂ. ನಾಲ್ಕನೆಯ ಸಹಸ್ರಮಾನದ ಕೊನೆಯ ಭಾಗದಿಂದ ಕಂಚಿನ ಮತ್ತು ಕಬ್ಬಿಣಯುಗದ ಸಂಸ್ಕøತಿಗಳೊಂದಿಗೆ ಮುಂದುವರಿದವು. ಮೊದಲ ಕಾಲದ ಸಮಾಧಿಗಳನ್ನು ಸಾಮಾನ್ಯವಾಗಿ ಮತ್ತೆ ಮತ್ತೆ ಉಪಯೋಗಿಸುತ್ತಿದ್ದರೂ, ಆಗಾಗ್ಗೆ ಹೊಸ ಗುಹೆಗಳನ್ನು ಸಮಾಧಿ ಕಾರ್ಯಕ್ಕಾಗಿ ನಿರ್ಮಿಸುತ್ತಿದ್ದದ್ದುಂಟು.

ಪಶ್ಚಿಮ ಏಷ್ಯದ ಈ ಪ್ರದೇಶಗಳನ್ನುಳಿದರೆ ಗುಹಾಸಮಾಧಿಗಳು ಕಂಡುಬರುವುದು ದಕ್ಷಿಣ ಭಾರತದ ಕೇರಳ ರಾಜ್ಯದ ಮಲಬಾರ್ ಮತ್ತು ಕೊಚ್ಚಿ ಪ್ರದೇಶಗಳಲ್ಲಿ ಮಾತ್ರ. ಆದರೆ ಕೇರಳದಲ್ಲಿ ಇವು ಕಬ್ಬಿಣಯುಗದ ಬೃಹತ್ ಶಿಲಾಸಮಾಧಿ ಸಂಸ್ಕøತಿಯ ಅವಿಭಾಜ್ಯ ಅಂಗವಾಗಿವೆ. ಕೇರಳದಲ್ಲಿ 19ನೆಯ ಶತಮಾನದ ಮೂರನೆಯ ದಶಕದಲ್ಲಿ ಜೆ. ಬ್ಯಾಬಿಂಗ್‍ಟನ್ ಇವನ್ನು ಗಮನಿಸಿದ ಮೇಲೆ ಹಲವಾರು ಹೊಸ ನೆಲೆಗಳನ್ನು ಕಂಡುಹಿಡಿಯಲಾಗಿದೆ.

ಸಾಧಾರಣವಾಗಿ ಕೇರಳದ ಗುಹೆಗಳಲ್ಲಿ ಮೊದಲಿಗೆ ಕಲ್ಲುಬಂಡೆಯ ಮೇಲ್ಭಾಗದಿಂದ ಚತುರಸ್ರ ಅಥವಾ ಚೌಕಾಕಾರದ ಒಂದು ಹಳ್ಳವನ್ನು ಕೊರೆದು ಅದರ ಒಂದು ಪಾಶ್ರ್ವದಲ್ಲಿ ತಳಕ್ಕೆ ಇಳಿಯಲು ಮೆಟ್ಟಿಲುಗಳನ್ನು ಬಿಡಿಸಲಾಗಿರುತ್ತದೆ. ಮೆಟ್ಟಿಲುಗಳ ಎದುರು ಪಾಶ್ರ್ವದಲ್ಲಿ ಹಳ್ಳದ ತಳಭಾಗದಿಂದ ಸ್ವಲ್ಪ ಎತ್ತರದಲ್ಲಿ ಒಂದು ಬಾಗಿಲಿದ್ದು ಅದರ ಮುಖಾಂತರ ಒಳಗಿನ ಅರ್ಧವೃತ್ತ, ವೃತ್ತ ಅಥವ ಚತುರ ಸ್ರಾಕಾರದ ಕೋಣೆಗೆ ಪ್ರವೇಶವಿರುತ್ತಿತ್ತು. ಕೋಣೆಯ ಒಳಭಾಗದ ಒಂದು,ಎರಡು ಅಥವಾ ಮೂರು ಕಡೆಗಳಲ್ಲೂ ಕಲ್ಲನ್ನು ಕೊರೆದು ನಿರ್ಮಿಸಿದ ಜಗುಲಿಗಳಿರುತ್ತಿದ್ದವು. ಅವುಗಳ ಮೇಲೆ ಮೃತದೇಹದ ಅವಶೇಷಗಳನ್ನೂ ಇನ್ನಿತರ ಸಮಾಧಿ ವಸ್ತುಗಳನ್ನೂ ಇಡಲಾಗುತ್ತಿತ್ತು. ಕೆಲವು ಗುಹೆಗಳಲ್ಲಿ ತುಂಡು ಕಂಬ ಮತ್ತು ಒಲೆಗಳನ್ನು ಸಹ ಕೊರೆದಿರಲಾಗುತ್ತಿತ್ತು. ಕೆಲವು ಗುಹೆಗಳಲ್ಲಿ ಮಧ್ಯಭಾಗದಲ್ಲಿ ಒಂದು ಕಂಬವಿದ್ದು, ಅದು ಚಾವಣಿಗೆ ಆಧಾರವಾಗಿರುತ್ತಿದ್ದರೆ ಮತ್ತೆ ಕೆಲವು ಗುಹೆಗಳಲ್ಲಿ ಕಂಬ ಮತ್ತು ರಂಧ್ರಗಳೆರಡೂ ಇರುತ್ತಿದ್ದರೆ ಮತ್ತೆ ಕೆಲವು ಗುಹೆಗಳಲ್ಲಿ ಇವೆರಡೂ ಇರುತ್ತಿರಲಿಲ್ಲ. ಅನೇಕ ಗುಹೆಗಳಲ್ಲಿ ಒಂದೇ ಭೂಗತ ಕೋಣೆಯಿರುತ್ತಿತ್ತು.ಕೆಲವು ಗುಹೆಗಳಲ್ಲಿ ಎರಡು ಮೂರು ಅಥವಾ ನಾಲ್ಕು ಕೋಣೆಗಳಿರುತ್ತಿದ್ದುವು ಹಲವು ಕೋಣೆಗಳುಳ್ಳ ಗುಹೆಗಳಲ್ಲಿ ಮಧ್ಯದ ಪ್ರವೇಶದ ಹಳ್ಳ ಒಂದೇ ಇರುತ್ತಿತ್ತು. ಮೆಟ್ಟಿಲುಗಳಿರುವ ಪಾಶ್ರ್ವ ಬಿಟ್ಟು ಉಳಿದ ಪಾಶ್ರ್ವಗಳಿಂದ ಕೋಣೆಗಳಿಗೆ ಪ್ರವೇಶದ್ವಾರವನ್ನು ನಿರ್ಮಿಸಲಾಗುತ್ತಿತ್ತು. ಪ್ರವೇಶದ್ವಾರಗಳನ್ನು ಮತ್ತು ಕೋಣೆಯ ಮೇಲಿನ ರಂಧ್ರಗಳನ್ನು ಸಾಮಾನ್ಯವಾಗಿ ಕಲ್ಲು ಚಪ್ಪಡಿಗಳಿಂದ ಮುಚ್ಚಲಾಗುತ್ತಿತ್ತು. 

ಕೇರಳ ಮತ್ತು ದಕ್ಷಿಣ ಭಾರತದ ಇತರ ಬೃಹತ್ ಶಿಲಾ ಸಮಾಧಿಗಳಲ್ಲಿ ಕಂಡು ಬರುವ ಆ ಸಂಸ್ಕøತಿಯ ಮುಖ್ಯಲಕ್ಷಣಗಳಾದ ಕಪ್ಪು ಮತ್ತು ಕೆಂಪು ಬಣ್ಣದ ಮಡಿಕೆಗಳು, ಕಬ್ಬಿಣದ ಆಯುಧೋಪಕರಣಗಳು ಮತ್ತು ಮೃತದೇಹದ ಅವಶೇಷಗಳ ಕೇರಳದ ಗುಹಾಸಮಾಧಿಗಳಲ್ಲಿ ದೊರಕಿವೆ. ಆದ್ದರಿಂದ ಈ ಗುಹಾಸಮಾಧಿಗಳು ಬೃಹತ್ ಶಿಲಾಸಮಾಧಿ ಸಂಸ್ಕøತಿಗೆ ಸೇರಿದುವೆಂಬುದು ನಿರ್ವಿವಾದದ ಸಂಗತಿ.

ಪ್ಯಾಲೆಸ್ಟೀನ್, ಸೈಪ್ರಸ್ ಮತ್ತು ಕೇರಳದ ಗುಹಾಸಮಾಧಿಗಳಲ್ಲಿ ಅನೇಕ ಸಾಮ್ಯಗಳಿವೆ. ಈ ಕಾರಣದಿಂದಾಗಿ ಗುಹಾಸಮಾಧಿ ಪದ್ಧತಿ ಪ್ಯಾಲೆಸ್ಟೀನಿನಿಂದ ಸಮುದ್ರ ಮಾರ್ಗವಾಗಿ ದಕ್ಷಿಣ ಭಾರತದ ಪಶ್ಚಿಮ ತೀರಪ್ರದೇಶಕ್ಕೆ ನೇರವಾಗಿ ಬಂದಿರಬಹುದೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಆದರೆ ಈ ಸಂಸ್ಕøತಿಯ ಲಕ್ಷಣಗಳಲ್ಲಿ ಕೆಲವು ಮುಖ್ಯ ವ್ಯತ್ಯಾಸಗಳಿರುವುದರಿಂದಲೂ ಕೇರಳದ ಗುಹಾಸಮಾಧಿಪದ್ಧತಿ ಅಲ್ಲಿಯ ಬೃಹತ ಶಿಲಾಸಮಾಧಿ ಸಂಸ್ಕøತಿಯ ಅವಿಭಾಜ್ಯ ಅಂಗವಾಗಿರುವುದರಿಂದಲೂ ಈ ವಿಷಯವಾಗಿ ಖಚಿತವಾಗಿ ಏನನ್ನೂ ಹೇಳುವುದು ಸದ್ಯಕ್ಕೆ ಕಷ್ಟವಾಗುತ್ತದೆ. ಒಟ್ಟಿನಲ್ಲಿ ಇದು ದಕ್ಷಿಣಭಾರತದಲ್ಲಿ ಕಬ್ಬಿಣಯುಗದ ವ್ಯಾಪಕ ಸಂಸ್ಕøತಿಯಾದ ಬ್ರಹತ್ ಶಿಲಾಸಮಾಧಿ ಸಂಸ್ಕøತಿಗೆ ಸೇರುತ್ತದೆಂದು ಮಾತ್ರ ನಿರ್ದಿಷ್ಟವಾಗಿ ಹೇಳಬಹುದಾಗಿದೆ.
(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ